ಆರೋಗ್ಯಕ್ಕೆ ಹಲಸಿನ ಹಣ್ಣು

Facebook UPAYUKTA MAAHITI #29 ಹಲಸಿನ ಹಣ್ಣು :
ಕೆಲವೊಂದು ಹಣ್ಣುಗಳು ವರ್ಷಪೂರ್ತಿ ಸಿಗುವುದಿಲ್ಲ, ಸೀಸನ್ ಸಮಯದಲ್ಲಿ ಮಾತ್ರ ದೊರೆಯುತ್ತದೆ, ಅಂತಹ ಸೀಸನ್ ಹಣ್ಣಾದ ಹಲಸಿನ ಹಣ್ಣು ಏಪ್ರಿಲ್ ತಿಂಗಳಿನಿಂದ ಜುಲೈ ಅಥವಾ ಆಗಸ್ಟ್ ತಿಂಗಳವರೆಗೆ ಸಿಗುತ್ತದೆ. ಮಳೆ ಬಿದ್ದ ಮೇಲೆ ಹಲಸಿನ ಹಣ್ಣನ್ನು ತಿಂದರೆ ಕಾಯಿಲೆ ಬರಬಹುದು ಎಂಬ ಭಯ ನಮ್ಮಲ್ಲಿ ಅನೇಕರಲ್ಲಿ ಇದೆ. ಆದರೆ ಈ ಹಣ್ಣು ಕಾಯಿಲೆ ತರುವುದಿಲ್ಲ, ಕಾಯಿಲೆ ಹೋಗಲಾಡಿಸಲು ಸಹಕಾರಿಯಾಗಿದೆ. ಇದನ್ನು ತಿಂದರೆ ಈ ಕೆಳಗಿನ 10 ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಹಲಸಿನ ಹಣ್ಣಿನ ಆರೋಗ್ಯಕರ ಗುಣಗಳು:
♦ ರೋಗನಿರೋದಕ ಶಕ್ತಿ ಹೆಚ್ಚು ಮಾಡುತ್ತದೆ: ಹಲಸಿನ ಹಣ್ಣು ತಿಂದರೆ ಕಾಯಿಲೆ ಬರುತ್ತದೆ ಎಂದು ತಿನ್ನಲು ಭಯಪಡುವಾಗ ಇದನ್ನು ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಂದರೆ ಆಶ್ಚರ್ಯವಾಗುವುದು ಸಹಜ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಉತ್ತಮ ಪೋಷಕಾಂಶಗಳಿದ್ದು ಶೀತ, ಸೋಂಕು ಇವುಗಳನ್ನು ತಪ್ಪಿಸಲು ಸಹಕಾರಿಯಾಗಿದೆ. ಇದರಲ್ಲಿ antioxidant ಪ್ರಮಾಣ ಅಧಿಕವಾಗಿದೆ.
♦ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸುತ್ತದೆ: ದೇಹದಲ್ಲಿ ಖನಿಜಾಂಶಗಳ ಕೊರತೆ ಉಂಟಾದರೆ ದೇಹದಲ್ಲಿ ಸಕ್ಕರೆ ಪ್ರಮಾಣ ಅಧಿಕವಾಗುತ್ತದೆ. ಹಲಸಿನ ಹಣ್ಣಿನಲ್ಲಿ ಖನಿಜಾಂಶಗಳು ಅಧಿಕವಾಗಿ ಇರುವುದರಿಂದ ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ.
♦ ಮೂಳೆ ಸವೆತವನ್ನು ತಡೆಗಟ್ಟುತ್ತದೆ: ಈ ಹಣ್ಣಿನಲ್ಲಿ ಅಧಿಕ ಮ್ಯಾಗ್ನಿಷಿಯಂ ಮತ್ತು ಕ್ಯಾಲ್ಸಿಯಂ ಅಂಶವಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಕಾರಿಯಾಗಿದೆ. ಮ್ಯಾಗ್ನಿಷಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿರುವ ಆಹಾರ ತಿಂದರೆ ಮೂಳೆಗಳು ಗಟ್ಟಿಯಾಗುವುದು.
♦ ಥೈರಾಯ್ಡ್ ಗ್ರಂಥಿಯನ್ನು ಆರೋಗ್ಯಕರವಾಗಿ ಇಡುತ್ತದೆ: ಹಲಸಿನ ಹಣ್ಣಿನಲ್ಲಿರುವ ಖನಿಜಂಶಗಳು (micromineral) ಥೈರಾಯ್ಡ್ ಗ್ರಂಥಿಯ ಆರೋಗ್ಯವನ್ನು ಕಾಪಾಡುತ್ತದೆ. ದೇಹದಲ್ಲಿ ಹಾರ್ಮೋನ್ ಗಳ ಉತ್ಪತ್ತಿಯನ್ನು ಸರಿ ಪ್ರಮಾಣದಲ್ಲಿ ಇಡಲು ಥೈರಾಯ್ಡ್ ಗ್ರಂಥಿ ಮುಖ್ಯ ಪಾತ್ರವಹಿಸುತ್ತದೆ.
♦ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ: ಒಂದು ಹಲಸಿನ ಹಣ್ಣಿನಲ್ಲಿ ಬಾಳೆಹಣ್ಣಿನಲ್ಲಿರುವಷ್ಟು ಪೊಟಾಷ್ಯಿಯಂ ಅಂಶವಿರುತ್ತದೆ. ಪೊಟಾಷ್ಯಿಯಂ ದೇಹದಲ್ಲಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.
♦ ಜೀರ್ಣಶಕ್ತಿ: ಇದರಲ್ಲಿ ನಾರಿನಂಶವಿರುವುದರಿಂದ ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ತಿನ್ನುವುದು ಒಳ್ಳೆಯದು.
♦ ಇರುಳು ಕುರುಡುತನ ನಿವಾರಣೆಗೆ ಸಹಕಾರಿಯಾಗಿದೆ: ಇದರಲ್ಲಿ ಕ್ಯಾರೆಟ್ ನಲ್ಲಿರುವ ಕಾಲು ಭಾಗದಷ್ಟು ವಿಟಮಿನ್ ಎ ಅಂಶವಿರುವುದರಿಂದ ಹಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ವಿಟಮಿನ್ ಎ ಕೊರತೆ ಉಂಟಾದರೆ ಇರುಳು ಕುರುಡುತನ ಉಂಟಾಗುವುದು.
♦ ಹೃದಯದ ಸ್ವಾಸ್ಥ್ಯ ಹೆಚ್ಚಿಸುತ್ತದೆ: ಇದರಲ್ಲಿ ವಿಟಮಿನ್ ಬಿ6 ಅಂಶವಿರುವುದರಿಂದ ರಕ್ತದಲ್ಲಿರುವ homocystein ಪ್ರಮಾಣ ಕಡಿಮೆ ಮಾಡಿ ಹೃದಯದ ಸ್ವಾಸ್ಥ್ಯ ಹೆಚ್ಚಿಸಲು ಸಹಕಾರಿಯಾಗಿದೆ.
♦ ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ: ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ದೇಹದಲ್ಲಿ ರಕ್ತ ಸರಾಗವಾಗಿ ಹರಿಯಲು ಸಹಕಾರಿಯಾಗಿದೆ. ಮೂಳೆಗಳನ್ನು ಬಲಪಡಿಸಿ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ತಡೆಗಟ್ಟುತ್ತದೆ.
♦ ರಕ್ತ ಹೀನತೆಯನ್ನು ತಡೆಗಟ್ಟುತ್ತದೆ: ಇದರಲ್ಲಿ ಕಬ್ಬಿಣದಂಶ ಕೂಡ ಇರುವುದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಗೆ ಇದನ್ನು ತಿನ್ನುವುದು ಒಳ್ಳೆಯದು.
♦ ಅಲ್ಸರ್ ವಿರುದ್ದ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಯನ್ನು ದೂರ ಮಾಡುತ್ತದೆ.ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ.
ಸಲಹೆ: ಇದನ್ನು ತಿಂದರೆ ಜ್ವರ ಬರುವುದಿಲ್ಲ, ಆದರೆ ಜ್ವರ ಇದ್ದಾಗ ಈ ಹಣ್ಣುಗಳನ್ನು ತಿನ್ನಲು ಹೋಗಬೇಡಿ.
ಸಂಗ್ರಹ ಮಾಹಿತಿ

Advertisements

ಪ್ರಾಥಮಿಕ ಶಿಕ್ಷಣಕ್ಕೆ ಇಂಗ್ಲೀಷ್ ಕಡ್ಡಾಯವೇ..?

Primary Education in Mother Tongue
ಪ್ರಾಥಮಿಕ ಶಿಕ್ಷಣಕ್ಕೆ ಇಂಗ್ಲೀಷ್ ಕಡ್ಡಾಯ ಮಕ್ಕಳಿಗೆ ಹಿಂಸೆ

ಕನ್ನಡ ಸಾಹಿತ್ಯ ಪರಿಷತ್ ಮತ್ತು ಆಡಳಿತವರ್ಗ..

ಕ.ಸಾ.ಪ. ಹಳ್ಳಿ ಮತ್ತು ಪಟ್ಟಣ ಪ್ರಾಥಮಿಕ ಶಾಲೆಗಳಿಗೆ ಭೇಟಿಕೊಟ್ಟು ಮಕ್ಕಳಿಗೆ ಕನ್ನಡ ಕಲಿಕೆ ಕಡ್ಡಾಯ ಏಕೆಂಬುದನ್ನು ವಿವರಿಸಿ ಹೇಳಬೇಕು. ತಂದೆ ತಾಯಿಗಳು ಪೋಷಕರಲ್ಲಿ ಕನ್ನಡ ಮಾತೃಭಾಷೆಯ ಪ್ರಾಮುಖ್ಯತೆ ಅರಿವುಮಾಡಿಸಬೇಕು.

ಗ್ರಾಮ ಪಂಚಾಯಿತಿಗಳಲ್ಲಿ, ಅಧ್ಯಕ್ಷರು, ಸದಸ್ಯರು ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಗಮನಹರಿಸಬೇಕು ತಮ್ಮ ಅನುದಾದಲ್ಲಿ ಒಂದಿಷ್ಟು  ಶಾಲೆಗಳಿಗೆಂದೇ ವಿನಿಯೋಗಿಸಬುದಲ್ಲವೇ..? ಮೇಲಾಗಿ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು, ಅವರುಗಳೊಂದಿಗೆ ಶಾಸಕರು ಹಾಗೂ ಸಚಿವರುಗಳು ಮನಸ್ಸು ಮಾಡಿದರೆ ತಾವೇ ತಮ್ಮ ವ್ಯಾಪ್ತಿಗೆ ಬರುವ ಶಾಲೆಯನ್ನು ದತ್ತು ತೆಗೆದುಕೊಂಡು ಉಳ್ಳವರಿಗೆ ಮೇಲ್ಪಂಕ್ತಿ ಹಾಕಬಹುದಲ್ಲವೇ.? ಅದಕ್ಕೇ ಬಸವಣ್ಣನವರು ಹೇಳಿದರು:“ಉಳ್ಳವರು ಶಿವಾಲಯವಾ ಮಾಡುವರು”
ಕೆಲ ಗ್ರಾಮಗಳಲ್ಲಿ ಶಿಕ್ಷಕರೇ ಸ್ವಯಂ ಸೇವಾ ಮನೋಭಾವದಿಂದ ತಮ್ಮ ಗ್ರಾಮದ ಶಾಲೆಯನ್ನು ಮಾದರಿ ಶಾಲೆಯಾಗಿ ಮಾಡಲು, ತಮ್ಮ ಕೈಯಿಂದ ಹಣ ಹಾಕಿದುದಲ್ಲದೇ ಜನರಿಂದ ಚಂದಾ ಎತ್ತಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.

ಮೊಟ್ಟಮೊದಲು ಕನ್ನಡದಲ್ಲೇ ಏಕೆ ಕಲಿಯಬೇಕು?

ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲೇ ಕನ್ನಡದಲ್ಲಿ ವಿದ್ಯಾಭ್ಯಾಸ ಪ್ರಾರಂಭವಾದರೆ ಕಲಿಯುವುದು ಸುಲಭವೆನಿಸಿ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಬರುತ್ತದೆ. ಇಲ್ಲವಾದರೆ ಬೆನ್ನಿನಮೇಲೆ ಪುಸ್ತಕಗಳ ಹೊರೆಹೊತ್ತು ಶಾಲೆಗೆ ಹೋಗುವುದೇ ಒಂದು ಹಿಂಸೆಯಾಗಿಬಿಡುತ್ತದೆ. ಈ ಕಾರಣದಿಂದ ಮಕ್ಕಳು ಮಂಕಾಗಿ ವಿದ್ಯಾಭ್ಯಾಸ ಮುಂದುವರಿಸದೇ ಚಿಕ್ಕವಯಸ್ಸಿನಲ್ಲೇ ಭವಿಷ್ಯ ಹಾಳುಮಾಡಿಕೊಳ್ಳುವುದೂ ಹೆಚ್ಚುತ್ತಿದೆ.

ಹೆತ್ತವರಿಗೆ ಮಕ್ಕಳನ್ನು ಸರಿದಾರಿಗೆ ತುರುವುದೇ ಸಮಸ್ಯೆಯಾಗುವುದು ವಾಸ್ತವ ಸಂಗತಿಯೇ. ಆಟವಾಡಿಕೊಂಡು ಪಾಠ ಕಲಿಯಬೇಕಾದ ಮಕ್ಕಳು ಮನೆಯಲ್ಲಿ ತಂದೆ ತಾಯಿ ಎಲ್ಲರೊಡನೆ ಬೆರೆತು ಕನ್ನಡ ಸವಿನುಡಿಗಳನ್ನಾಡಬೇಕಾದವರು ಬಾಲ್ಯದಲ್ಲೆ ಯಾರ ಮಾತೂ ಕೇಳದೇ ಕೈಗೂ ಸಿಗದೇ ಕಣ್ ತಪ್ಪಿಸಿ ನಡೆದುಕೊಳ್ಳುವುದು, ಪ್ರಾಯಕ್ಕೆ ಬಂದಾಗ ಹದ್ದು ಮೀರಿಹೋಗುವುದಾದಾಗ ಹೆತ್ತವರಿಗೆ ಅರಣ್ಯರೋಧನವೇ.

ಹೀಗಾಗಿ ಮಕ್ಕಳು ಚಿಕ್ಕಂದಿನಿಂದಲೇ ಮಾತೃಭಾಷೆ ಮತ್ತು ಸಂಸ್ಕೃತಿಯಿಂದ ಮಾತ್ರವಲ್ಲ ಮನೆ ಮನಗಳಿಂದಲೇ ದೂರವಾಗಿಬಿಡುವ ದೊಡ್ಡ ಅಪಾಯವೇ ಕಾದಿರುತ್ತದೆ ಎಂಬುದಕ್ಕೆ ದಿನೇದಿನೇ ಉದಾಹರಣೆಗಳು ಬಹಳಷ್ಟು ಹೆಚ್ಚು ಕಾಣಸಿಗುತ್ತಿವೆ.

ಜ್ಞಾನಾರ್ಜನೆ ಮಾಡಲು ಮಾನವೀಯತೆ ಅರಿತು ಬದುಕಲು ಕನ್ನಡವೇ ಬೇಕೇ ?
ಎಂಬ ಪ್ರಶ್ನೆ ಬೇರೆ,. ಖಚಿತವಾಗಿ ಹೇಳಬೇಕೆಂದರೆ, ಚಿಕ್ಕಂದಿನಿಂದ ಜ್ಞಾನಾರ್ಜನೆಯಲ್ಲಿ ಪ್ರಾಪಂಚಿಕತೆ ಹಾಗೂ ಮಾನವೀಯತೆ ಪರಿಭಾಷೆ ಅರ್ಥವಾಗುವುದೇ ಮಾತೃಪ್ರೇಮದಲ್ಲಿ. ಆಕೆಯ ಅಕ್ಕರೆ ಅಪ್ಯಾಯಮಾನವಾದ ತಾಯ್ ನುಡಿಗಳಲ್ಲಿ..

ನಮ್ಮ ರಾಷ್ಟ್ರಕವಿ ಗೋವಿಂದ ಪೈ ಅವರ ಕವನದ ಸಾಲು ನೆನಪಿಗೆ ಬರುತ್ತದೆ-
ತಾಯಬಾರ ಮೊಗವ ತೋರ ಕನ್ನಡಿಗರ ಮಾತೆಯೆ
ಹರಸು ತಾಯೆ ಸುತರ ಕಾಯೆ ನಮ್ಮ ಜನ್ಮದಾತೆಯೆ
….ಅಕ್ಕರೆಯಿಂದೆಮ್ಮನಾಳ್ವೆ ನೀನೆ ಕಣಾ ನಮ್ಮ ಬಾಳ್ವೆ
ನಿನ್ನ ಮರೆಯಲೆಮ್ಮೆವು ತನು ಕನ್ನಡ, ಮನ ಕನ್ನಡ, ನುಡಿಕನ್ನಡ ಎಂಬೆವು….

ಮನೆಯೇ ಮೊದಲ ಪಾಠಶಾಲೆ ಎಂದರು ನಮ್ಮ ಹಿರಿಯರು.

ತಾಯಿ ಮೆಲುವಾಗಿ ಕನ್ನಡ ನುಡಿಯಲ್ಲಿ ಮಕ್ಕಳನ್ನು ಓಲೈಸಿ  ಕೈಹಿಡಿದು ಕೂರಿಸಿಕೊಂಡು, ಕನ್ನಡಭಾಷೆಯಲ್ಲೇ ತಿದ್ದಿ ತೀಡಿ ಒತ್ತುಕೊಟ್ಟು ಹೇಳಿಕೊಡುವುದರಲ್ಲಿ ಮಕ್ಕಳಿಗೆ ಮಹದಾನಂದ ಅಲ್ಲವೇ..? ಮಕ್ಕಳಿಗೆ  ತಾಯ್ ನುಡಿಯಲ್ಲಿ ಕಲಿಕೆ ನೀರುಕುಡಿದಷ್ಟು ಸುಲಭವೆನ್ನಿಸುತ್ತದೆ. ಇತಿಹಾಸದ ಪುಟಗಳನ್ನು ತಿರುವಿನೋಡಿದರೆ, ಸ್ವಾಮಿವಿವೇಕಾನಂದರಿಗೆ, ಶಿವಾಜಿಗೆ, ಭೌತವಿಜ್ಞಾನಿ ಮಣಿಭೌಮಿಕ್ ಮುಂತಾದ ಮಹಾನುಭಾವರಿಗೆ ಅವರ ತಾಯಿಯಂದಿರ  ದೈವಭಕ್ತಿ, ಧರ್ಮಶ್ರದ್ಧೆ ನಲ್ನುಡಿಗಳೇ ಜ್ಞಾನಾರ್ಜನೆಗೆ ಸ್ಫೂರ್ತಿ ಹಾಗೂ ಅವರ ಭವಿಷ್ಯರೂಪಿಸಿಕೊಳ್ಳಲಿಕೆ ಪ್ರೇರಕಶಕ್ತಿ.

ನಿಮಗೂ ಗೊತ್ತಿರಬಹುದು, ಈಗಾಗಲೇ ತಂದೆ ತಾಯಿಗಳು- ಪೋಷಕರು ಎಚ್ಚೆತ್ತುಕೊಂಡಿದ್ದಾರೆ. ಕನ್ನಡ ಶಾಲೆಗಳಿಲ್ಲದ ನಗರ, ಗ್ರಾಮಗಳಲ್ಲಿ ಮನೆಯಲ್ಲೇ ಮಕ್ಕಳಿಗೆ ಖಾಸಗಿ ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ಮೊದಲು ಕೊಟ್ಟು ಜೊತೆಗೆ ಇಂಗ್ಲೀಷ್ ನ್ನೂ ಕಲಿಸಿ ಹೀಗೆ ಮಕ್ಕಳಿಗೆ ಮೂರನೇ ತರಗತಿವರೆಗೆ ಮನೆಯಲ್ಲೇ ತರಬೇತಿ ನೀಡಿ ಆನಂತರ, ಸರ್ಕಾರದ ಸಂಬಂಧಪಟ್ಟ ಇಲಾಖೆಯಿಂದ  ವಿಶೇಷ ಪ್ರವೇಶಾವಕಾಶಕ್ಕೆ ಆದೇಶ ಪಡೆದು ಮಕ್ಕಳನ್ನು ಪ್ರಾಥಮಿಕ 3ನೇ ತರಗತಿ ಹೆಚ್ಚೆಂದರೆ ಅರ್ಹತೆ ಇದ್ದಮಕ್ಕಳಿಗೆ ಪ್ರೌಢಶಾಲೆಗೂ ಸಹ ಪ್ರವೇಶಾವಕಾಶ ಪಡೆದು ಮಕ್ಕಳ  ಮುಂದಿನ ಉನ್ನತ ಶಿಕ್ಷಣಕ್ಕೆ ಹಾಗೂ ಉತ್ತಮ ಬದುಕು ಭವಿಷ್ಯಕ್ಕೆ  ರೂವಾರಿಗಳಾಗುತ್ತಿದ್ದಾರೆ.

ಹಾಗೆ ನೋಡಿದರೆ, ಕನ್ನಡ ಗಾಳಿ ಗಂಧ (ಕನ್ನಡ ಕಸ್ತೂರಿ ಎನ್ನುತ್ತೇವೆ) ಇಲ್ಲದೇ ಬೆಳೆದು ಉನ್ನತ ಉದ್ಯೋಗದಲ್ಲಿದ್ದರೇನು! ನಮ್ಮ ದೇಶ, ಭಾಷೆ, ನೆಲ, ಜಲ, ಧರ್ಮ ಮತ್ತು ಸಂಸ್ಕತಿ ಮತ್ತು ಪುರಾಣೇತಿಹಾಸಗಳ ಬಗ್ಗೆ ಸ್ಪಷ್ಟವಾದ ಪರಿಜ್ಞಾನವಿಲ್ಲದೇ ತೊದಲುವ ಯುವಕ/ಯುವತಿಯರನ್ನು ಕಂಡಾಗ ಮರುಕವಾಗುತ್ತದೆ. ಹಣವೊಂದೇ ಸಾಕು ಆರಾಮ ಜೀವನಶೈಲಿಗೆ, ಇನ್ನು ಅದನ್ನೆಲ್ಲ ತಿಳಿದು ಏನಾಗಬೇಕಿದೆ? ಎಂಬ ಹಮ್ಮು ಬೇರೆ, ವೈಜ್ಞಾನಿಕವಿಚಾರ ವೈಪರಿತ್ಯ, ವ್ಯಕ್ತಿತ್ವವಿಕಾಸ ಅರ್ಥಹಿನವಾಗಿ  ಜೀವನವೇ ಯಾಂತ್ರಿಕ ಅನಿಶ್ಚಿತವಾಗಿ ಎಲ್ಲಿಗೆ ಕೊಂಡೊಯುತ್ತದೆಂಬುದು ಅನೇಕ ದೃಷ್ಟಾಂತಗಳಲ್ಲಿ ಕಂಡುಬರುತ್ತಿರುವುದು ಶೋಚನೀಯವೇ. ಮತ್ತೆ ಕೆಲವರು ಮುಂದೊಂದು ದಿನ ಪ್ರಬುದ್ಧಮಾನಕ್ಕೆ ಬಂದಾಗ ತಾವು ಕನ್ನಡ ಕಲಿಯಲಿಲ್ಲ; ಈಗಂತೂ ಕಲಿಯಲಿಕ್ಕ ಪುರ್ಸೊತ್ತಿಲ್ಲವೆಂದು ಪಶ್ಚಾತ್ತಾಪ ಪಡುವುದೂ ಅಂಥವರ ಸಂಖ್ಯೆ ಹೆಚ್ಚುತ್ತಿರುವುದು ದುರಾದೃಷ್ಟಕರವೇ.,

ಮಕ್ಕಳು ಚಿಕ್ಕಂದಿನಿಂದಲೇ ಶಾಲೆ ಹಾಗೂ ಮನೆಯಲ್ಲಿ ಇಂಗ್ಲೀಷ್ ಕಲಿಯಲೆಬೇಕು. ಇದು ನಿಜಕ್ಕೂ ಮಕ್ಕಳಿಗೆ ಹಿಂಸೆಯಲ್ಲವೇ..? ಹಾಗೆ ಮಕ್ಕಳ ಮೃದು ಮನಸ್ಸಿನ ಮೇಲೆ ನಮ್ಮ ಭಾಷೆಯಲ್ಲದ ಭಾಷೆಯ ಕಲಿಕೆ ಒತ್ತಡ ಹಾಕಿದರೆ, ಮಕ್ಕಳು ಓದಿನಲ್ಲಿ ಹಾಗೂ ವಿದ್ಯಾಭ್ಯಾಸದಲ್ಲಿ ಆಸಕ್ತಿಯನ್ನೇ ಕಳೆದುಕೊಂಡು ಮಂಕಾಗಿಬಿಡುತ್ತಾರೆ. ಅಷ್ಟೇ ಅಲ್ಲ ತಂದೆತಾಯಿಗಳ ವರ್ತನೆ ವಿಚಿತ್ರವಾಗಿ ನಿರ್ಭಾವುಕರಾಗುತ್ತಾರೆ.  ಪ್ರಾಯಕ್ಕೆ ಬಂದಮೇಲೂ ಅದರ ದುಷ್ಪರಿಣಾಮ ಕ್ಕೆ ಹೆತ್ತವರೇ ಮಕ್ಕಳಿಗೆ ಶತ್ರುಗಳಾಗುವ ಉದಾಹರಣೆಗಳನ್ನೂ ನೋಡುತ್ತಿದ್ದೇವೆ.

ನನ್ನ ಅನುಭವದಲ್ಲಿ ಹೇಳಬೇಕೆಂದರೆ, ನನ್ನ ಮೂವರು ಗಂಡು ಮಕ್ಕಳೂ ಪ್ರಾಥಮಿಕ ಶಾಲೆಯಲ್ಲಿ ಕನ್ನಡದಲ್ಲೇ ಓದಿ  ಆನಂತರ ಪ್ರೌಢಶಾಲೆಯಲ್ಲಿ ಇಂಗ್ಲೀಷ್ ನಲ್ಲಿ ಮಾಧ್ಯಮದಲ್ಲಿ ಮುಂದುವರೆದು ನಂತರ ಸ್ನಾತೋಕತ್ತರ ಪದವಿಪಡೆದು  ಸಾಫ್ಟ್ ವೇರ್ ನಲ್ಲಿ ಉದ್ಯೋಗಿಗಳಾಗಿ ತಾಂತ್ರಿಕ ಪರಿಣಿತಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ.. ಅವರ ಕಂಪೆನಿಗಳಿಂದಲೇ ವಿದೇಶಕ್ಕೂ ಹೋಗಿ ಬಂದಿದ್ದಾರೆ. ಕುಟುಂಬದಲ್ಲಿ ನಮ್ಮೊಂದಿಗೇ ಇದ್ದಾರೆ. ಮನೆಯಲ್ಲಿ ನಾವು ಮಾತನಾಡುವುದು ಕನ್ನಡವೇ. ಮಕ್ಕಳಿಗೆ ಕನ್ನಡದಲ್ಲಿ ಚೆನ್ನಾಗಿ ಓದಲು ಮತ್ತು ಬರೆಯಲು ಬರುತ್ತದೆ; ಕಂಪ್ಯೂಟರ್ ನಲ್ಲೂ ಸಹ.
….

ಮಾಸಿದ ನೋಟು ಮತ್ತು ಮುದಿವಯಸ್ಸು ಗರಿಮುರಿನೋಟು ಮತ್ತು ಹೆಂಡತಿ

IMG_20150204_205606911_HDRಬೆಂಗಳೂರಿಗೆ ಮಟ್ರೋ ರೈಲು ಬಂದು ಕೆಲವು ವರುಷಗಳಾದರೂ ನಾನು ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಲು ಮನಸ್ಸು ಮಾಡಿರಲಿಲ್ಲ. ನಿನ್ನೆ ಭಾನುವಾರ ಟಿ-ದಾಸರಹಳ್ಳಿಯಿಂದ ಮಂತ್ರಿಸ್ಕ್ವೇರ್ ಗೆ ಟಿಕೆಟ್ ತೆಗೆದುಕೊಂಡಾಗ, ನೂರು ರೂ.ಗೆ ಚಿಲ್ಲರೆಯಾಗಿ ಟೋಕನ್ ಜೊತೆಗೆ ಬಂದದ್ದು 50 ರ ಮಾಸಿದ ಮೆತ್ತಗೆ ಮುದುಡಿದ ನೋಟು. ಬೇರೆ ಕೊಡಿ ಎಂದು ಕೇಳಿದರೆ, ಲೇಡಿ ಕೌಂಟರ್ ಕ್ಲರ್ಕ ಕೊಟ್ಟ ಉತ್ತರ- “ಅದಕ್ಕೂ ನಿಮ್ಮಹಾಗೆ ವಯಸ್ಸಾಗಿದೆ” ಎನ್ನಬೇಕೆ..? ಓಹ್! ಬಲು ಜಾಣೆ ಈಕೆ ಎಂದುಕೊಂಡೆ. ತಟ್ಟನೆ ಉತ್ತರಿಸದೇ ಟೋಕನ್ ನೊಂದಿಗೆ ಅದನ್ನೂ ತೆಗೆದುಕೊಂಡು ಬಂದೆ.
ಆನಂತರ, ರೈಲಿನಲ್ಲಿ ಪಯಣವಾಯಿತು. ಹತ್ತಿರದ ಮಂತ್ರಿಮಾಲ್ ಗೆ ಭೇಟಿಕೊಟ್ಟು ಸಂಪಿಗೆ ರಸ್ತೆಯಲ್ಲಿ ಮನೆಗೆ ಅಗತ್ಯವಾದುವುಗಳನ್ನು ಕೊಂಡುಕೊಂಡು ಬಂದೆ. ಅದೇಕೋ ರಾತ್ರಿ ಹಾಸಿಗೆಗೆ ತೆರಳುವ ಮುನ್ನ ಇದ್ದಕ್ಕಿದ್ದಂತೆ ಆ ಮೆಟ್ರೋ ಕೌಂಟರ್ ಹುಡುಗಿ ಕಟಕಿಯಾಡಿದುದರ ಬಗ್ಗೆ ನನ್ನ ತಲೆ ಸುಮ್ಮನಿರದೆ ಆಲೋಚಿಸಲಾರಂಭಿಸಿತು,
ಒಬ್ಬ ಮನುಷ್ಯ ಮುದುಕನಾದರೇನು! ಅವನನ್ನು ಯಕಶ್ಚಿತ್ ಹಣಕ್ಕೆ ಹೋಲಿಸುವುದೇನು?!

  • ಹಣದಂತೆ ನಾವುಗಳು ಚಲಾವಣೆಯಾಗುವುದೆಂದರೇನು?
   ಮುದಿವಯಸ್ಸಿನ ತಂದೆ ತಾಯಿಗಳನ್ನು ಮನೆಯಲ್ಲಿ ಗೌರವಿಸಿ ಆದರಿಸುವುದಿಲ್ಲದಿದ್ದರೆ, ಅವರು ಮಕ್ಕಳು ಮತ್ತು ಸೊಸೆಯಂದಿರ ನಡುವೆ ಚಲಾವಣೆಯಾಗಲಾರರೆಂದೇ..
  • ಬಸ್ಸಿನಲ್ಲಿ ಹಿರಿಯನಾಗರಿಕರ ಆಸನದಲ್ಲಿ ಕುಳಿತ ಯುವಕ ಎದ್ದು ನಿಂತು, “ನೀವು ಕುಳಿತುಕೊಳ್ಳಿ” ಎಂದು ಗೌರವಿಸದಿದ್ದರೆ ಅಲ್ಲಿ ಮುದಿಜೀವ ಚಲಾವಣೆಯಾಗಲಿಲ್ಲವೇಂದೇ.
  • ಜನವಾಹನಗಳ ಟ್ರಾಫಿಕ್ ನಲ್ಲಿ ಮುದಿಜೀವ ರಸ್ತೆ ದಾಟುತ್ತಿರುವಾಗ, ವಾಹನ ಚಾಲಕರು ಸಾವಧಾನಿಸದಿದ್ದರೆ ಅಲ್ಲಿ ಅವರು ಚಲಾವಣೆಯಾಗಲಿಲ್ಲವೆಂದೇ. ಆಗ ದೇವರೇ ಆ ಮುದಿಜೀವವನ್ನು ಕಾಪಾಡಬೇಕಷ್ಟೇ.
   • ಎಲೆಕ್ಟ್ರಾನಿಕ್ ಟೋಕನ್ ಸಿಸ್ಟಂ ಇಲ್ಲದ ಬ್ಯಾಂಕ್ ಕೌಂಟರಿನ ಸರತಿ ಸಾಲಿನಲ್ಲಿ ನಿಲ್ಲಲಾಗದೇ ನಿಂತಿದ್ದಾಗ ವಯಸ್ಸಾದವರೆಂದು ಮುಂದಿನ ಯುವಕರು ಸಹಕರಿಸಿ ಆದ್ಯತೆ ಕೊಡದಿದ್ದರೆ ಅಲ್ಲಿ ಮುದಿವಯಸ್ಸಿನ ಜೀವ ಚಲಾವಣೆಯಾಗಲಿಲ್ಲವೆಂದೇ. ಸ್ನೇಹಿತರೇ, ಮನುಷ್ಯ ಹಣವನ್ನು ದುಡಿಯುತ್ತಾನೆಯೇ ಹೊರತು ಹಣವೇ ಅವನನ್ನು ದುಡಿಸಿಕೊಳ್ಳುವುದಿಲ್ಲವಲ್ಲ.  ಹಣಕ್ಕೇ ಅವನು ದಾಸನಲ್ಲ; ದಾಸನಾಗಬಾರದು. ಹಾಗೆ ಹಣಕ್ಕೆ ದಾಸರಾದವರ ಬಾಯಲ್ಲಿ ಸದಾ ಹಣದ್ದೇ ಧ್ಯಾನ!
   ಏನೇ ಹೇಳಿ, ಇಂದಿನ ದಿನಗಳಲ್ಲಿ ಹಣವೇ ಪ್ರಧಾನವಾಗಿ ಕಾಣುತ್ತಿದೆ.
   ಈ ಪ್ರಪಂಚಲ್ಲಿ. ಅದರ ದುಷ್ಪರಿಣಾಮವನ್ನೂ ನಾವುಗಳು ಕಾಣುತ್ತಲೇ ಇದ್ದೇವೆ.
   ಇನ್ನೂ ಮಾನವೀಯತೆ ಸತ್ತಿಲ್ಲ. ಎಂದಿಗೂ ಸಾಯುವುದೂ ಇಲ್ಲ.
   ಎಂದಿಗೂ ಯುವಜನಾಂಗದಲ್ಲಿ ಮುದಿವಯಸ್ಸಿನ ಹಿರಿಯರನ್ನು ಗೌರವಿಸಿ ಆದರಿಸುವವರು ಕಡಿಮೆಯಾದರೂ ಇರುತ್ತಾರೆ.
   ನಾವು ಮುದಿವಯಸ್ಸಿನವರಾದರೂ ಚಲಾವಣೆಯಾಗುವ ಸಾಧ್ಯತೆಗಳು ಸಾಕಷ್ಟಿರುತ್ತವೆ. ಅದೇ ಆ ನೋಟು ಚಲಾವಣೆ ಆಗುವ ಸಾಧ್ಯತೆ ಗ್ಯಾರಂಟಿ ಇಲ್ಲವಲ್ಲ.  ಇಷ್ಟಕ್ಕೂ ಅದು ಚಲಾವಣೆಯಾಯಿತೆನ್ನಿ ನಿಡಿದಾದ ನಿಟ್ಟುಸಿರಿನೊಂದಿಗೇ.
   ಗರಿಮುರಿ ನೋಟು ಮತ್ತು ಹೆಂಡತಿ
   ಮೇಲೆ ಆದ ಅನುಭವಕ್ಕಿಂತ ಇನ್ನೊಂದು ಕಹಿ ಅನುಭವ ನಾನು ರಾಜಾಜಿನಗರದಲ್ಲಿದ್ದಾಗ ಆದದ್ದು. ಅದು ಈಗ ನೆನಪಿಗೆ ಬರುತ್ತಿದೆ,

   ಅವರೂ ಒಬ್ಬ ವಯಸ್ಸಿನವರು ಆಗಾಗ್ಗೆ ಪುಸ್ತಕದ ಅಂಗಡಿಯೊಂದರಲ್ಲಿ ಭೇಟಿಯಾಗುತಿದ್ದರು. ನನಗಿಂತಲೂ ಎರಡು ವರ್ಷಗಳೇ ಹಿರಿಯರು. ಅವರೇನೂ ಲೇಖಕರಲ್ಲ. ಎಂದೂ ಏನನ್ನೂ ಬರೆದವರಲ್ಲ. ರಿಟೈರ್ಡ್ ಆದ ಮೇಲೆ ಹೆಗಲಿಗೊಂದು ಚೀಲ ತಗುಲಿಸಿಕೊಂಡು, ನಾಲ್ಕು ಜ್ಯೋತಿಷ್ಯ ಪುಸ್ತಿಕೆಗಳನ್ನು ಓದಿಕೊಂಡು, ಪಂಚಾಂಗ ಇಟ್ಟುಕೊಂಡು ಜಾತಕ ಬರೆದುಕೊಡುವುದು, ಜ್ಯೋತಿಷ್ಯ ಹೇಳಿ ಹಣಮಾಡುತ್ತಾ ಈ ದಂಧೆ ಆರಂಭಿಸಿ ಒಂದಿಷ್ಟು ಗೆಲವಾಗಿದ್ದರು. ಇವರಿಗೆ ಇದ್ದಕ್ಕಿದ್ದಂತೆ ಒಂದು ಪುಸ್ತಕ ಬರೆಯುವ ಯೋಚನೆ ಬರಬೇಕೇ.. ಸರಿ ಬರೆದೇ ಬಿಟ್ಟರು. ಹಾರ್ಡ್ ಬೌಂಡನಲ್ಲಿ ಪ್ರಕಟಿಸಿಯೂ ಬಿಟ್ಟರು. ಅದನ್ನು ನಾನೂ ಕೊಂಡು ಓದಲೇ ಬೇಕಾಯಿತು ಮುಲಾಜಿಗೆ ಸಿಕ್ಕು. ಓಹ್, ಅದು ಅರಿ ಭಯಂಕರ ಪುಸ್ತಕ. ಅದರಲ್ಲಿ ಜ್ಯೋತಿಷ್ಯದ ಬಗ್ಗೆ ಸಾಕಷ್ಟು ಮಾಹಿತಿ ಕಲೆಹಾಕಿದ ಲೇಖನಗಳಿದ್ದವು.

   “ಬ್ರಹ್ಮ ಸತ್ಯ ಜ್ಯೋತಿಷ್ಯ ಸತ್ಯ”, “ಸಾಧನೆಗಳು ಈವತ್ತಿರುತ್ತವೆ ನಾಳೆ ಬದಲಾಗುತ್ತಲೆ ಇರುತ್ತವೆ (ಪಾಪ. ಅವರಿಗೆ ಸಾಧನೆ ಪದದ ಅರ್ಥವೇ ಗೊತ್ತಿಲ್ಲ. ಉತ್ಪನ್ನಗಳು (ಪ್ರಾಡಕ್ಟ್ ) ಶಾಶ್ವತವಲ್ಲ. ವಿಜ್ಞಾನವೆಂದರೆ ವಿಶೇಷ ಜ್ಞಾನ. ಅದು ಶಾಶ್ವತವೆಂದರಿತಿಲ್ಲ) ಆದ್ದರಿಂದ, ವಿಜ್ಞಾನ ಶಾಶ್ವತವಲ್ಲ, ಜ್ಯೋತಿಷ್ಯ ಶಾಶ್ವತ ಸತ್ಯ ಎಂದು ಸಾರಿ ಸಾರಿ ಹೇಳಿದ್ದರು. ಬ್ರಹ್ಮ ಸತ್ಯ ಜಗನ್ ಮಿಥ್ಯ ಎಂಬುದು, ಜ್ಯೋತಿಷ್ಯವೂ ನೂರಕ್ಕೆ ನೂರರಷ್ಟು ಸತ್ಯವಾಗುವುದಿಲ್ಲ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ಇನ್ನೂ ಕೆಲವು ಸಾಮಾಜಿಕ ಚಿಂತನೆಗಳಂತೂ ನಮ್ಮನ್ನು ಬೆಚ್ಚಿ ಬೀಳಿಸುವಂತಿದ್ದವು.
   ಅದರ ಒಂದು ಸ್ಯಾಂಪಲ್ “ಹೆಂಡತಿ ಹೇಗಿರಬೇಕೆಂಬುದು ಕೂಡ.
   ಹೆಂಡತಿ ಎಂದರೆ ಆಗತಾನೆ ಎಟಿಎಂ ನಿಂದ ತಂದ ಗರಿಮುರಿ ನೋಟಿನಂತಿರಬೇಕಂತೆ (ಪಾಪ ಅವರಿಗೆ ಎಟಿಎಂ ಬಳಕೆ ಗೊತ್ತಿಲ್ಲವಲ್ಲ. ಅಲ್ಲೂ ಹಳೆಯ ನೋಟಿರುತ್ತವೆಂಬುದು). ಹಾಗಿದ್ದರೇನೆ ಅವಳು ಎಲ್ಲಕಡೆ ಚಲಾವಣೆ ಆಗುತ್ತಾಳಂತೆ ಓಹ್ ಅವರ ಹೆಂಡತಿಯನ್ನು ಆ ಶ್ರೀರಾಮನೇ ಕಾಪಾಡಬೇಕಷ್ಟೇ ಅನ್ನಿಸದಿರಲಿಲ್ಲ.
   ಇಂಥ ಮೌಲಿಕ ಚಿಂತನೆಗಳು ತಲೆ ಚೆಟ್ಟು ಹಿಡಿಸಿ, ಆ ಪುಸ್ತಕವನ್ನು ಕೆಳಗಿಟ್ಟು ಹೀಗೂ ಉಂಟೇ… ಈ ಪ್ರಪಂಚದಲ್ಲಿ ಹಣಕ್ಕಾಗಿ ಪುಸ್ತಕ ಬರೆಯುವ ಅದನ್ನು “ಜ್ಞಾನಸಂಗಮ” ವೆನ್ನುವರೂ…
   ಆಮೇಲೆ ಇನ್ನೇನು ಮಾಡಲಿ ಆ ಪುಸ್ತಕವನ್ನ ಮನೇಲಿಟ್ಟು ಕೊಂಡರೆ ಕಷ್ಟವೆಂದು ರದ್ದಿಗೆ ಹಾಕಿದ್ದಾಯಿತು.

ಕಟ್ಟುವೆವು ನಾವು ಹೊಸ ನಾಡೊಂದನು…

madison Square Modiಇದು, ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಬಂದು ಅದೆಷ್ಟು ವರುಷಗಳಾಗಿವೆಯೋ ಸರಿಸುಮಾರು ಅಷ್ಟೇ ವಯಸ್ಸಾಗಿರುವ ನನ್ನ ವ್ಯಥೆ ಎನ್ನಿ
ಅನಿಸಿಕೆಯೆನ್ನಿ ಎನ್ನಿ….
ಧರ್ಮದ ವ್ಯಾಖ್ಯೆ-
ಮಾನವ ಜನಾಂಗದ ಉಳಿವಿಗಾಗಿ ಮಾಡುವುದೆಲ್ಲವೂ ಧರ್ಮ-ಮಾನವಧರ್ಮ
ರಾಜಕಾರಣದಲ್ಲಿ ಆಧಿಕಾರಕ್ಕೆ ಬರುವುದಕ್ಕಾಗಿ, ಅಧಿಕಾರದಲ್ಲಿ ಉಳಿಯುವುದಕ್ಕಾಗಿ ಮಾಡುವುದೆಲ್ಲವೂ ಅಧರ್ಮ.
ಧರ್ಮಕ್ಕೆ ಅಧರ್ಮದ ಮಸಿ ಬಳಿಯುವುದೇ ರಾಜಕಾರಣವೆಂಬಂತಾಗಿರುವುದೇ ಶೋಚನೀಯ ಸಂಗತಿ.
ಕಾರಣವೇನೆಂದರೆ, ಕಳೆದ ದಶಕಗಳಲ್ಲಿ ಅನಕ್ಷರಸ್ಥರು, ಮುಗ್ಧಜನರು ಯಾರು ಹೇಗೆ ರಾಜ್ಯವಾಳಿದರೇನು ತಮಗೆ
ಎರಡು ಹೊತ್ತು ಊಟ ಮಲಗಲು ಆಶ್ರಯ ಮನೆ ಸಿಕ್ಕರಾಯಿತು ಎಂಬಂತಾದುದರಿಂದ. ವಿದ್ಯಾವಂತರು ಬುದ್ಧಿವಂತರೂ ಕೂಡ
ಯಾರು? ಯಾವ ಪಕ್ಷ ರಾಜ್ಯವಾಳಿದರೇನು! ತಾವು ಕಷ್ಟಪಡುತ್ತೇವೆ, ಕೈತುಂಬ ಸಂಬಳ ಪಡೆಯುತ್ತೇವೆ;
ಈ ದೇಶದ ಹಣೆಬರಹವಿಷ್ಟೇ ಎಂಬಂತೆ ಇರುವುದೂ, ಮತದಾನ ಮಾಡದೇ ಮನೆಯಲ್ಲೇ ಉಳಿದುಬಿಡುವುದಿತ್ತು.
ಹೀಗೇ ಕಳೆದ ದಶಕಗಳಲ್ಲಿ ಚುನಾವಣೆಗಳಿಂದ ಚುನಾವಣೆಗಳಿಗೆ ಹತಾಶರಾಗಿ ಮತನೀಡದೇ ಮನೆಯಲ್ಲುಳಿದುದರಿಂದಲೇ ನಮ್ಮ
ಯುವಕರ ಯುವಶಕ್ತಿ ಏನೆಂಬುದು ತಿಳಿಯದೇ ವ್ಯರ್ಥವಾಗಿ ಹೋಗಿತ್ತು; ದೇಶ ಕಟ್ಟುವ ಅಭಿವೃದ್ಧಿ ಕಾಣುವ ಮಹಾ ಅಭಿಯಾನದಲ್ಲಿ.
ಹಾಗಾಗದೇ ಇದ್ದಿದ್ದರೆ, ಕಳೆದ ಆರು ದಶಗಳಲ್ಲಿ ಭಾರತ ರಾಕೆಟ್ ವೇಗದಲ್ಲಿ ಅಭಿವೃದ್ಧಿ ಪಥದಲ್ಲಿ ಮುಂದುವರೆದು ಎಂದೋ ವಿಶ್ವದಲ್ಲಿ ಮೊಟ್ಟಮೊದಲ ಸ್ಥಾನದಲ್ಲಿರುತ್ತಿತ್ತು. ಬಹುಜನ ಬಡವರೆಲ್ಲ ಉದ್ಯೋಗಸ್ಥರಾಗಿ ಸ್ವಾವಲಂಬಿಗಳಾಗಿರುತ್ತಿದ್ದರು.
ನನಗೆ ನೆನಪಾಗುತ್ತಿದೆ: ದಿನಪತ್ರಿಕೆಯೊಂದರಲ್ಲಿ, ಎಲ್ಲ ದೇಶಗಳ ಮಹಾನ್ ನಾಯಕರುಗಳು ಒಂದೆಡೆ ಸೇರಿದ ಸಂದರ್ಭವೊಂದರಲ್ಲಿ
ಪತ್ರಿಕಾ ಛಾಯಗ್ರಾಹರು ತೆಗೆದ ಚಿತ್ರವದು. ಅಂದು ಆ ಚಿತ್ರದಲ್ಲಿ ಎರಡನೇ ಸಾಲಿನಲ್ಲಿ ನಮ್ಮ ದೇಶದ ಹಿಂದಿನ ಪ್ರಾಧಾನಿ ಮನಮೋಹನ್ ಸಿಂಗ್ ನಿಂತಿದ್ದರು.
ಆದರೆ, ಕಳೆದ ಮಹಾಚುನಾವಣೆಯಲ್ಲಿ ಬಹುತೇಕ ವಿದ್ಯಾವಂತರೆಲ್ಲ ನರೇಂದ್ರ ಮೋದಿ ಅವರ ವ್ಯಕ್ತಿತ್ವ ಹಾಗೂ ನಾಯಕತ್ವದಲ್ಲಿ ಭರವಸೆ ತಳೆದರು. ಕಚೇರಿಗಳಿಂದ, ಮನೆಯಿಂದ, ಮಹಲುಗಳಿಂದ ಹೊರಬಂದರು. ಮತದಾನ ಮಾಡಿದರು. ಅದರ ಪರಿಣಾಮವಾಗಿ ಈವತ್ತು ವಿಶ್ವನಕ್ಷೆಯಲ್ಲಿ ನಮ್ಮ ರಾಷ್ಟ್ರ ತಲೆಎತ್ತಿ ಮೊದಲ ಸಾಲಿನಲ್ಲಿ ನಿಲ್ಲುವಂತಾಗಿದೆ.
ನಮ್ಮ ದೇಶ ಕಂಡ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರ ನಾಯಕರ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ಈಗ ನಮ್ಮ ಯುವಜನಾಂಗ ಎಚ್ಚೆತ್ತಿದೆ- ಯುವ ವಿದ್ಯಾವಂತ ಪೀಳಿಗೆ ರಾಷ್ಟ್ರಕಟ್ಟುವ ಅತ್ಯತ್ಸಾಹದಲ್ಲಿ ಮುನ್ನೆಡಿದಿದ್ದಾರೆ.
ಅವರೊಂದಿಗೆ ಅವಿದ್ಯಾವಂತರೂ ಮುಗ್ಧರೂ ಬಡಜನರೂ ಕೈಜೋಡಿಸಿದ್ದಾರೆ. ಕಳೆದ ಆರು ದಶಕಗಳೇ ಅಧಿಕಾರ ಪಕ್ಷವೊಂದರ “ಕೈ” ಯಲ್ಲಿದ್ದೂ
ನಾವು ಕಂಡದ್ದೇನು! ಆದ ಅಭಿವೃದ್ಧಿಯಲ್ಲವೂ ಅನಿವಾರ್ಯವಾಗಿಯೇ ಆಗಿದೆಯಷ್ಟೇ. ಅದೇ ದೇಶಭಕ್ತಿ ದೇಶಾಭಿವೃದ್ಧಿಯ ದೃಷ್ಟಿಯಲ್ಲಿಯೇ ಆಗಿದ್ದಿದ್ದರೆ …? ಆದದ್ದೆಲ್ಲ ಹಗರಣಗಳ ಸರಮಾಲೆಯೇ..
ದೇಶದ ಹಿತಾಸಕ್ತಿಯಲ್ಲಿ ಮತಬಾಂಧವರ ವಿಶ್ವಾಸ ಪಡೆಯದೇ ತಮ್ಮ ಕುಟಿಲ ನೀತಿಯಿಂದ ಕೆಲ ರಾಜಕೀಯ ಪಕ್ಷಗಳು ಬೊಬ್ಬೆ ಹೊಡೆಯುವ
ಕೋಮುವಾದ, ಮತೀಯಶಕ್ತಿ ವಿರುದ್ಧ ತಮ್ಮ ಹೋರಾಟ ಎಂಬ ಬೊಗಳೆಗಳೆಲ್ಲವೂ ಮತಬಾಚುವ ಅಧಿಕಾರಕ್ಕೇರುವ, ಸ್ವಾರ್ಥ ರಾಜಕೀಯವೇ…
ಈ ದೇಶದಲ್ಲಿ ಬಹುಸಂಖ್ಯಾತ ಹಿಂದೂಗಳೊಂದಿಗೇ ದಿನನಿತ್ಯ ಸ್ನೇಹ ಸೌಹಾರ್ದತೆ ಬಯಸುತ್ತಾ ಬದುಕುತ್ತಿರುವವರು ಅಂದಾಜಿಗೆ ಇಪ್ಪತ್ತು- ಇಪ್ಪತ್ತೈದು ಕೋಟಿ ಅಲ್ಪಸಂಖ್ಯಾತರಲ್ಲವೇ…?. ಅವರ ಮತಗಳಿಂದಷ್ಟೇ ಅಧಿಕಾರಕ್ಕೆ ಬರಲು ಹಾಗೂ ಈ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಎಂದೆಂದಿಗೂ ಸಾಧ್ಯವಿಲ್ಲವೆಂಬುದು ಕೋಮುವಾದ, ಮತೀಯಶಕ್ತಿ ಎಂಬ ಭ್ರಮಾಧೀನರಿಗೆ ತಿಳಿಯದಿರುವಂತ ಸಂಗತಿಯೇನು..?
ಭಾರತದಲ್ಲಿ ನಮಗೆ ಹುಟ್ಟಿನಿಂದ ಬಂದ ಸಹಜಧರ್ಮವೆಂಬಂತೆ ಹಿಂದೂಗಳ ಪರವಾಗಿ ನಿಂತು, ಅಲ್ಪಸಂಖ್ಯಾತರ ಹಾಗೂ ದಲಿತರ, ರೈತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿರುವ ದೊಡ್ಡದೊಂದು ಪಕ್ಷ ಕೋಮುವಾದಿ ಹೇಗೆ? ಅದು ಕೆಳಮಟ್ಟದ ರಾಜಕೀಯವೆಂಬುದು ಎಂಥ ದಡ್ಡನಿಗೂ ಅರಿವಾಗುವ ಕಾಲ ಇದೀಗ ಬಂದಿದೆಯಲ್ಲವೇ..?
ನಾವು ಹಿಂದೂ ಹಿಂದೂಧರ್ಮವನ್ನು ಪ್ರೀತಿಸುತ್ತೇವೆ; ಅದರಲ್ಲಿ ಇರುತ್ತೇವೆ. ಅನ್ಯಧರ್ಮಿಯರನ್ನು ಸಹೋದರ ಭಾವದಿಂದ ನೋಡುತ್ತೇವೆ; ನೋಡುತ್ತಲಿದ್ದೇವೆ ಎಂದು ಭಾವಿಸುವ ಜನಸಾಮಾನ್ಯರೆಲ್ಲರೂ ಕೋಮುವಾದಿಗಳೇ ಸ್ವಾಮಿ..? ನಿಮ್ಮ ರಾಜಕೀಯ ಪರಿಭಾಷೆಯಲ್ಲಿ ಯಾರು ಕೋಮುವಾದಿಗಳು? ನಿಮ್ಮ ಮುಖ್ಯ ಅಜೆಂಡಾ ದಿಂದ ಮೊದಲು ಅದನ್ನು ಕಿತ್ತೊಗೆಯಿರಿ. ಬಹುಮತ ಪಡೆದು ಆಡಳಿತಾರೂಢವಾಗಿರುವ ಪಕ್ಷಕ್ಕೆ ದೇಶಾಭಿವೃದ್ಧಿ ಪಥದಲ್ಲಿ ಸಹಕರಿಸಿರಿ ಎಂಬುದೇ ಭಾರತೀಯರೆಲ್ಲರಲ್ಲಿ,   ಕಷ್ಟಾರ್ಜಿತ ದುಡಿಮೆಯಲ್ಲಿ ಯೇ ಸಂಪತ್ತು ಸಮೃದ್ಧಿ, ಶಾಂತಿ ನೆಮ್ಮದಿ ಬಯಸುವ ಜನಮಾನಸದಲ್ಲಿ ಅಂತರಂಗದ ನಿತ್ಯ ನಿರಂತರ ಧ್ವನಿಯಾಗಿದೆ ಎಂಬುದನ್ನು ಮರೆಯದಿರಿ.
ಜನತೆಗೆ ಆಸೆ ಆಮಿಷಗಳನ್ನೊಡುವ ಮಂಕು ಬೂದಿ ಎರಚುವ ಒಡೆದು ಆಳುವ ನೀತಿಯಿಂದ ನಿದ್ರೆಗೆಟ್ಟು ರಾಜಕೀಯ ಮಾಡದಿರಿ ಎಂಬುದೇ ಎತ್ತೆತ್ತಲೂ ಕೇಳಿಬರುವ ಒಕ್ಕೊರಲಿನ ಅಳಲೂ ಆಗಿದೆಯಲ್ಲದೇ
ಹಾಗೆ ಮಾಡಿದರೆ ಅದು ದೈವಕ್ಕೆ ಧರ್ಮಕ್ಕೇ ದ್ರೋಹವಲ್ಲವೇ…? ಎಂಬ ಜ್ವಲಂತ ಪ್ರಶ್ನೇಯೇ ಹಾದಿ ಬೀದಿಗಳಲ್ಲಿ ತಾಂಡವಾಡುತ್ತಿದೆ ….
 ನೂರ ಇಪ್ಪತ್ತು ಕೋಟಿ ಜನಸಂಖ್ಯೆಯನ್ನು ಮೀರಿದ ಭಾರತ ತನ್ನ ಸಹಬಾಳ್ವೆಯ ಮೂಲಕ ಜಗತ್ತಿಗೆ ಮಾದರಿಯಾಗುವಂತೆ ಮಾಡುವುದನ್ನು ಮೋದಿ ಗುರಿಯಾಗಿಟ್ಟು ಕೊಂಡಿದ್ದಾರೆ. ಹಿಂದೂಗಳನ್ನೂ ಅಲ್ಪಸಂಖ್ಯಾತರ ವಿಶ್ವಾಸವನ್ನೂಗಳಿಸುತ್ತ ದೇಶದ ಹಿತಾಸಕ್ತಿಯಲ್ಲಿ ಮುಂದಿನ ಯುವಪೀಳಿಗೆಯನ್ನು ಉದ್ಯೋಗಸ್ಥರಾಗಿ ಸ್ವಾವಲಂಬಿಗಳಾಗಿ ಮಾಡಲು ಫಣ ತೊಟ್ಟು ಮುನ್ನೆಡೆದಿದ್ದಾರೆ. ಈ ದೇಶ ಕೀಳುಮಟ್ಟದ ರಾಜಕಾರಣ ಕಂಡು ರೋಸಿ ಹೋಗಿದೆ. ಅದು ಬೃಹತ್ ಸಾಮಾಜಿ ಬದಲಾವಣೆ ಸುಧಾರಣೆ ಬಯಸುತ್ತದೆ ಅಲ್ಲವೇ…?
ಇದೀಗ ಹೊಸ ಶಖೆ ಆರಂಭವಾಗಿದೆ. ಪರಿವರ್ತನೆ ಜಗದನಿಯಮ. ಅದನ್ನು ಅದ್ಯಾವ ನೀಚ ಸ್ವಾರ್ಥವೂ ದುಷ್ಟಶಕ್ತಿಯೂ ತಡೆಯೊಡ್ಡಿ ನಿಲ್ಲಿಸಲಾರದು. ರಾಜಕೀಯವೆಂದರೆ, ಅಧರ್ಮವೇ ಎಂದುಕೊಂಡಿದ್ದ ಬಹುಮಂದಿಯೆಲ್ಲಾ ಇದೀಗ ನಿಜಕ್ಕೂ ಕಣ್ತೆರೆಯುವಂತಾಗಿದೆ.
ಹಿಂದು ಮುಂದಿನ ರಾಜಕೀಯ ವಿದ್ಯಾಮಾನಗಳನ್ನರಿತ ವಿದ್ಯಾವಂತ ಬುದ್ಧಿವಂತರೊಂದಿಗೇ ಅವರು ಎದೆಯುಬ್ಬಸಿ ಒಂದಾಗಿ ನಿಂತಿದ್ದಾರೆ.
ವಿಶ್ವದಲ್ಲೇ ಅತಿ ದೊಡ್ಡ ಪ್ರಜಾಪ್ರಭುತ್ವ ನಮ್ಮದು. ಅಂತೆಯೆ ನಮ್ಮ ದೊಡ್ಡ ದೇಶದಲ್ಲಿ ಬಹುಸಂಖ್ಯೆಯಲ್ಲಿರುವ ನಮ್ಮ ಯುವಶಕ್ತಿ ಜಾಗೃತವಾಗಿದೆ. ಹೌದು, ಭಾರತದ ಯುವಶಕ್ತಿಯು ತನ್ನ ಅಂತಃ ಸತ್ವದಿಂದ ಏನೆಲ್ಲವನ್ನೂ ಜಯಿಸುತ್ತದೆ ಎಂಬುದನ್ನೂ ಸ್ವಾತಂತ್ರ‍್ಯ ಪೂರ್ವದ ಹೋರಾಟ ದಲ್ಲಿ  ಇತಿಹಾಸವೇ ಹೇಳುತ್ತದೆ.
ನಮ್ಮ ವಿಜಯನಗರ ಸಾಮ್ಯಾಜ್ಯ ಒಂದು ಕಾಲಕ್ಕೆ ವಿಶ್ವನಕ್ಷೆಯಲ್ಲಿ
ಪ್ರಥಮ ಸ್ಥಾನದಲ್ಲಿದ್ದ ಶ್ರೀಮಂತ ರಾಜ್ಯವಾಗಿತ್ತು. ಈಗ ಮತ್ತೆ ಆ ಅವಕಾಶ ಬಂದಿದೆ ಎಂಬುದನ್ನು ಮರೆಯದಿರೋಣ.
ದೇಶದ ಜನತೆಯಲ್ಲಿ  ಈಗ ಮುಗ್ಧರೂ ಮುಗ್ಧರಾಗಿ ಉಳಿದಿಲ್ಲ ಅವರೂ ಕೂಡ ಪ್ರಾಜ್ಞರೂ, ಪಂಡಿತರೂ, ಪ್ರಾಧ್ಯಾಪಕರೂ ಜ್ಞಾನಪೀಠಿಗಳೂ ಎನಿಸಿಕೊಂಡ ಢೋಂಗಿ ಬುದ್ಧಿಜೀವಿಗಳ  “ಸಮಾಜವಾದ” ಏನೆಂದು ಅರಿಯಬಲ್ಲವರಾಗಿದ್ದಾರೆ.
ಅಂತೆಯೇ, ದೇಶದ ಯುವಶಕ್ತಿ ಎಚ್ಚೆತ್ತಿದೆ. ಸ್ವಚ್ಛ ರಾಜಕಾರಣದಲ್ಲಿ ಪ್ರಮಾಣಿಕರಿದ್ದಾರೆ ಅವರೊಂದಿಗೇ ಅಧಿಕಾರಿಗಳಿದ್ದಾರೆ. ಅವರಲ್ಲಿ ಕ್ಷಾತ್ರ ಶಕ್ತಿ ಮೈತಳೆದಿದೆ. ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ಮೇಲ್ಪಂಕ್ತಿ ಹಾಕಿದ್ದಾರೆ.  ರಾಜಕಾರಣದಲ್ಲಿ, ಪ್ರಜಾಪ್ರತಿನಿಧಿಗಳು, ಅಧಿಕಾರಸ್ಥರೂ ರಾಜ್ಯ ರಾಜ್ಯಗಳನ್ನು ಕಟ್ಟುವುದರಲ್ಲಿ ರಾಷ್ಟ್ರವನ್ನು ಕಟ್ಟಿ ಮುನ್ನೆಡೆಸುವಲ್ಲಿ,  ಮಾನವ ಸೇವಾಧರ್ಮ-ಪ್ರಜೆಗಳಲ್ಲಿ ಸಹಬಾಳ್ವೆಯ ಮನೋಧರ್ಮ ಏನೆಂಬುದಕ್ಕೆ ಹೊಸಭಾಷ್ಯ ಬರೆಯಲಿದ್ದಾರೆ.
ಬನ್ನಿ, ನಮ್ಮ ವಿಶ್ವಕವಿ ಕುವೆಂಪು ನುಡಿದಂತೆ
“ನೂರು ಮತದ ಹೊಟ್ಟ ತೂರಿ ಬನ್ನಿ”.  ಬನ್ನಿ, ಎಲ್ಲ ದೇಶ ಬಾಂಧವರೇ ಸ್ವಾತಂತ್ರ‍್ಯ ಪೂರ್ವದ ಭಾವೈಕ್ಯತೆಯಲ್ಲಿ ಮತ್ತೆ ಒಗ್ಗೂಡಿ ಮುನ್ನೆಡೆಯೋಣ-

ಬಿಸಿ ನೆತ್ತರುಕ್ಕುಕ್ಕಿ ಆರಿಹೋಗುವ ಮುನ್ನ
ಹರೆಯದೀ ಮಾಂತ್ರಿಕನ ಮಾಟ ಮಸಳುವ ಮುನ್ನ
ಕಟ್ಟುವೆವು ನಾವು ಹೊಸ ನಾಡೊಂದನು
ಕಲ್ಪನೆಯ ಬೀಡೊಂದನು.

-ಕವಿ ಗೋಪಾಲಕೃಷ್ಣ ಅಡಿಗರ ಕವನ-

ಶತಮೂರ್ಖರು

ಮೂರ್ಖರಾಗುವವರು ಇರುವವರೆಗೂ
ಮೂರ್ಖರನ್ನು ಮಾಡುವವರೂ ಇರುತ್ತಾರೆ.
ಪ್ರಾಧ್ಯಾಪಕರು ತಮ್ಮ ಮೂರ್ಖತನ
ಪ್ರದರ್ಶಿಸಿ ನಗೆಪಾಟಲಾದರೆ
ಶಿಷ್ಯರು ತಮ್ಮ ಜಾಣತನ
ಪ್ರದರ್ಶಿಸಿ ಗೌರವಾನ್ವಿತರಾಗುತ್ತಾರೆ.

ಪ್ರಾಧ್ಯಾಪಕರಲ್ಲಿ ಪ್ರಾಜ್ಞರೂ ಇದ್ದಾರೆ
ಶಿಷ್ಯರಲ್ಲಿ ಅವರನ್ನು ಮೀರಿಸಿದವರೂ ಇದ್ದಾರೆ
ಇವರಿಬ್ಬರಲ್ಲೂ ಶತಮೂರ್ಖರ ಗುಂಪೂ ಇದೆ.

ಮೂರ್ಖರಾಟ ಆಡುವುದು
ವರುಷಕ್ಕೊಂದೇ ದಿನ
ಶತಮೂರ್ಖರನ್ನು ನೋಡಬಹುದು
ವರುಷದ ಮುನ್ನೂರ ಅರವತ್ತೈದೂ ದಿನ.

-ತ್ರಿಗುಣಾತ್ಮಕ ಪ್ರಪಂಚ
೧ ಏಪ್ರಿಲ್,೨೦೧೫

ಸ್ನೇಹನಾ ಪ್ರೀತಿನಾ…

ಸ್ನೇಹನಾ ಪ್ರೀತಿನಾ ಎನ್ನದಿರಿ;
ಸ್ನೇಹ, ಸ್ನೇಹವೇ
ಪ್ರೀತಿ, ಪ್ರೀತಿ ಪ್ರೀತಿಯೇ
ಸ್ನೇಹದಲ್ಲಿ ರೀತಿಯಿದೆ;
ಪ್ರೀತಿಯಲ್ಲಿ ನೀತಿಯಿದೆ.

ಸ್ನೇಹ ಪ್ರೀತಿಯಾಗಬೇಕು
ಪ್ರೀತಿ ಪ್ರೇಮವಾಗಬೇಕು
ಪ್ರೇಮದಲ್ಲಿ ಪೂರ್ಣಾನಂದ ಲಭಿಸಬೇಕು;
ಸ್ನೇಹ, ಪ್ರೀತಿ, ಪ್ರೇಮ
ಇವು ಮೂರೂ ಸಮ್ಮಿಳಿತವಾಗುವುದು
ತೀರಾ ಅಪರೂಪವೇ

ನಮ್ಮವರು “ಧರ್ಮ ಸಂಸ್ಕೃತಿ ಹಾಗೂ ಇನ್ನಿಲ್ಲದ ಸಾಮಾಜಿಕ ಕಟ್ಟುಪಾಡುಗಳಿಂದ ಬಡವರಾಗಿದ್ದಾರೆಯೇ…?

“ಹೆಣ್ಣಿಗೆ ಸೌಂದರ್ಯವೆಂಬುದು ಜೀವನಾನಂದದ ಸ್ವರೂಪ.
ಅದೇ ಆಕೆಗೆ ಶತ್ರುವಾಗಿ ಶಾಪವಾಗಬಾರದು”

ಪಾಶ್ಚಿಮಾತ್ಯರು ಸ್ವಚ್ಛಂದ ಪ್ರವೃತ್ತಿಯವರಾಗಿದ್ದೇ ಸಿರಿವಂತರೆನಿಸಿದ್ದಾರೆ. ನಮ್ಮವರು “ಧರ್ಮ ಸಂಸ್ಕೃತಿ ಹಾಗೂ ಇನ್ನಿಲ್ಲದ ಸಾಮಾಜಿಕ ಕಟ್ಟುಪಾಡುಗಳಿಂದ ಬಡವರಾಗಿದ್ದಾರೇಕೆ…? ಎಂದೇ ನಮ್ಮ ಯುವಜನಾಂಗದಲ್ಲಿ ಬಹುಮಂದಿ ಪಾಶ್ಚಾತ್ಯ ಜೀವನ ಶೈಲಿ ಅನುಕರಿಸುತ್ತಿರುವರೇ..? ಹಾಗಾದರೆ, ಪಾಶ್ಚಾತ್ಯರಲ್ಲಿ ಶೀಲ ಚಾರಿತ್ರ್ಯಗಳಿಲ್ಲವೇ…? ಎಂಬ ಗೊಂದಲಕ್ಕೆ ಕಾರಣವಾಗಿರುವುವುವೆಂದರೆ ಇಂಟರ್ ನೆಟ್ ನ ಅಶ್ಲೀಲ ಜಾಲತಾಣಗಳು, ಹೆಚ್ಚುತ್ತಿರುವ ಸೆಕ್ಸ್ ಮತ್ತು ಹಿಂಸೆ ಕ್ರೌರ್ಯಗಳ ವೈಭವೀಕರಣದ ಸಿನಿಮಾಗಳು. ಸಮಾಜದಲ್ಲಿ ಕಾಣುತ್ತಿರುವ ಅವ್ಯವಹಾರಗಳು ಮತ್ತು ಗಂಡು ಹೆಣ್ಣುಗಳ ಅನೈತಿಕ ಸಂಬಂಧಗಳು, ಹೊಲಸು ರಾಜಕೀಯದ ಹಗರಣಗಳೂ ಮತ್ತು ಭ್ರಷ್ಟಾಚಾರದಿಂದ ಗಳಿಸಿದ ಸಂಪತ್ತಿನ ಶ್ರೀಮಂತಿಕೆ ಶ್ರೀಮಂತಿಕೆಯೇ.. ಮನುಷ್ಯನಿಗೆ ಸುಖಜೀವನ ಎನ್ನುವುದೇ…? ಹಾಗಿದ್ದರೆ ನಮ್ಮ ದೇಶದಲ್ಲಿ ಜನಸಂಖ್ಯೆ ಇಷ್ಟರ ಮಟ್ಟಿಗೆ ಹೆಚ್ಚುತ್ತಲೇ ಇರಲಿಲ್ಲ; ಬಡವರೆಂಬುವರು ಬದುಕುತ್ತಲೇ ಇರಲಿಲ್ಲ ಅಲ್ಲವೇ…?

ಸಭ್ಯಸರಳ ಜೀವನದಲ್ಲಿ  ಶೀಲ ಚಾರಿತ್ರ್ಯ ಎಂಬುದು ಇನ್ನೂ ಉಳಿದಿದ್ದರೆ ಅದು ಮಧ್ಯಮ ವರ್ಗ ಮತ್ತು  ವಿದ್ಯಾವಂತರಲ್ಲಿಯೇ…  ಆದರೆ, ವಿದ್ಯಾವಂತರಲ್ಲಿ  ಮೋಜಿನ ಐಷಾರಾಮೀ (ಲಕ್ಸುರೀ ) ಜೀವನಕ್ಕೆ  ಮರಳಾಗಿ ಹಾಳಾಗುತ್ತಿರುವವರೂ ಇದ್ದಾರೆಂಬುದು ದುರಾದೃಷ್ಟದ ಸಂಗತಿಯೇ…

ವಿಶ್ವದಲ್ಲಿ ಬಡತನದಲ್ಲೇ ಪ್ರತಿಭಾವಂತರು ಹಾಗೂ ಮಹಾನ್ ಸಾಧಕರು ಹೆಚ್ಚು ಕಂಡುಬರುತ್ತಾರೆ ಎಂಬುದು ಸರ್ವವಿಧಿತವಾಗಿದೆ. ಯಾಕೆಂದರೆ, ಸಿರಿವಂತಿಕೆ ಸೋಮಾರಿತನ ಕಳ್ಳತನ ಸುಳ್ಳತನ ಕಲಿಸಿದರೆ, ಬಡತನ ಕಷ್ಷಸಹಿಷ್ಣುತೆಯಿಂದಲೇ ಬದುಕನ್ನು ಎದುರಿಸುವುದನ್ನು ಕಲಿಸುತ್ತದೆ. ಜೀವನದಲ್ಲಿ ಹಠತೊಟ್ಟು ಪ್ರಾಮಾಣಿಕತೆ ಪರಿಶ್ರಮದಿಂದಲೇ  ಯಶಸ್ಸು ಸಾಧಿಸಲು ಸಿರಿವಂತರಾಗಲು ಛಲವಂತರನ್ನಾಗಿಸುತ್ತದೆ. ಆದರ್ಶವಾದ ಆದರ್ಶಮಾದರಿಯ ಸರಳ ಜೀವನದಲ್ಲಿ ಶಾಂತಿ ಸಮಾಧಾನ ನೆಮ್ಮದಿ ಇದೆ ಎಂಬುದು ಎಲ್ಲಕಾಲಕ್ಕೂ ಮಾನ್ಯವೇ ಆಗಿದೆ.

ನಾವು ಬಡವರಾಗಿಯೂ ಸುಖೀ ಜೀವನ ನಡೆಸುವ ಸಂಸ್ಕಾರವಂತರೇ ಆಗಿದ್ದೇವೆ. ಪಾಶ್ಚತ್ಯರು ಡಾಕ್ಟ ರಿನ್ಸ್ (Doctrines)ವಿವರಿಸಲು ಆರೇಳು ಪದಗಳಿದ್ದರೆ, ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಮೂರೇ ಪದಗಳು. ಅವುಗಳೆಂದರೆ, ಸತ್ವ, ರಜಸ್ಸು, ತಮಸ್ಸು ಎಂಬ ತ್ರಿಗುಣಗಳು. ರಜೋ ಮತ್ತು ತಮೋಗುಣಗಳು ಎಷ್ಟರ ಮಟ್ಟಿಗೆ ಮನುಷ್ಯತ್ವವನ್ನು ಕೆಡಿಸುತ್ತದೆ ಎಂದರೆ, ಇತ್ತೀಚಿನ ವರುಷಗಳಲ್ಲಿ ಅತ್ಯಾಚಾರಗಳು ಹೆಚ್ಚಿದಂತೇ, ಆತ್ಮಹತ್ಯೆಗಳೂ ಹೆಚ್ಚುತ್ತಿವೆ. ಗಂಡು ಹೆಣ್ಣಿನ ಸ್ಚಚ್ಛಂದಪ್ರವೃತ್ತಿ ಮತ್ತು ಸ್ವೇಚ್ಛಾಚಾರಗಳು ಮನಸ್ವಾಸ್ಥ್ಯ ಕೆಡಿಸುವುದಲ್ಲದೇ ಏಡ್ಸ್ ನಂತಹ ಭೀಕರ ಖಾಯಿಲೆಗಳಿಗೆ ಈಡುಮಾಡುತ್ತವೆ.

ಹಾಗೆ ನೋಡಿದರೆ, ಈಗೀಗ ನಮ್ಮ ಯುವಜನರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ; ನಮ್ಮ ಧರ್ಮ ಮತ್ತು ಸಂಸ್ಕೃತಿ ಪರಂಪರೆಯ ಆಚಾರ ವಿಚಾರಗಳು ಮತ್ತು ಕಟ್ಟುಪಾಡುಗಳು ಅದೆಷ್ಟು ಆರೋಗ್ಯಕರವೆಂಬುದನ್ನು ಮನಗಂಡಿದ್ದಾರೆ. ಸತ್ವಗುಣದಲ್ಲಿ ಸತ್ವಶಾಲಿಗಳಾಗಲು ಧ್ಯಾನ ನಿರತರಾಗಿ. ಸತ್ವಗುಣದಿಂದಲೇ ಇಂದ್ರಿಯಗಳನ್ನು ನಿಗ್ರಹಿಸುತ್ತಾ ಚತುರ್ವಿಧ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವನ್ನು  ಹೊಂದಲು ಸಾಧಕರಾಗುತ್ತಿದ್ದಾರೆ.

ಅಂತೆಯೇ, ಎಲ್ಲೇ ಇರಲಿ ಹೇಗೇ ಇರಲಿ ನಮ್ಮವರು ಮೋಜು ಮಜಾಮಾಡುವ ಜೀವನಶೈಲಿಯ ಸ್ವಚ್ಛಂದ ಸೀಮೆಯಲ್ಲಿ ಹುಚ್ಚರಾಗಿ ಅಂಡಲೆಯುವಂತಾಗಬಾರದೆಂಬುದೇ ನಮ್ಮ ಭಾರತೀಯರೆಲ್ಲರ ಸದಾಶಯವಾಗಿದೆ ಎಂಬುದು ಸತ್ಯಸ್ಯಸತ್ಯವಾಗಿದೆ ಅಲ್ಲವೇ…?